Wednesday, March 25, 2009

ಭಾರಿ ಬಿಸಿಲಿಗೆ ಯತ್ನಾಳ್ ಮಜ್ಜಿಗೆ !

ಮಹಾ ಚುನಾವಣೆಯ ವಿಶೇಷ ಪುಟ

ಪುಟ್ಟ ಮಾಹಿತಿ..

ಅವಳಿ ಜಿಲ್ಲೆಗಳ ಪ್ರಖ್ಯಾತ ಕಲಾವಿದರು, ಸೇನಾ ದಂಡನಾಯಕರು, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿದವರು, ಮೇಧಾವಿಗಳು ಹೀಗೆ ಕೃಷ್ಣೆಯ ನಾಡಿನ ಮಹನೀಯರ ಕುರಿತ ಪರಿಚಯವನ್ನು ಬ್ಲಾಗ್ನಲ್ಲಿ ಪ್ರಾರಂಭಿಸಿದ್ದೇವೆ. ಮತ್ತೆ, ಮತ್ತೆ ಬ್ಲಾಗ್ಗೆ ಭೇಟಿ ನೀಡಿ.

Thursday, March 12, 2009

ಬೈಯ್ದ ಮೈದುನರಿಗೆ ಅತ್ತಿಗೆಯರಿಂದ ಲತ್ತೆ !






ವಿಕ ಸುದ್ದಿಲೋಕ
ಶಿರೂರ: ಸಮೀಪದ ನೀಲಾನಗರ ತಾಂಡಾದಲ್ಲಿ ಗುರುವಾರ ತಮ್ಮ ತಮ್ಮ ಅತ್ತಿಗೆಯಗೆಯರನ್ನು ಮೈದುನರು ಆಶ್ಲೀಲ ಪದಗಳಿಂದ ಬೈಯತೊಡಗಿದರು. ಇದನ್ನು ಸಹಿಸದ ಅತ್ತಿಗೆಯರು ಅಟ್ಟಾಡಿಸಿಕೊಂಡು ಹೋಗಿ ಬಡಿಗೆಯಿಂದ ಬಡಿದರು.
ಅತ್ತಿಗೆಯರ ಹೊಡೆತ ತಪ್ಪಿಸಿಕೊಳ್ಳಲು ತಮ್ಮ ಕೈಯಲ್ಲಿನ ಬಡಗಿಯನ್ನು ಅಡ್ಡಗಟ್ಟಿದರು. ಕೊನೆಗೆ ಅವರೇ ಸೋತು ಹತ್ತೋ,ಇಪ್ಪತೋ ರೂಪಾಯಿ ಕೊಟ್ಟು ಹೋದರು.
ಇದೇನಪ್ಪಾ ಬೈಯ್ದ ಮೈದುನರನ್ನು ಹದ್ದುಬಸ್ತಿನಲ್ಲಿಡುವ ಬದಲು ಬಹುಮಾನ ಕೊಡುತ್ತಾರಲ್ಲ ಎಂದು ಗಾಬರಿಯಾಗಬೇಡಿ. ಬಾಗಲಕೋಟ ತಾಲೂಕಿನ ಶಿರೂರ ಸಮೀಪದ ನೀಲಾನಗರ ಲಂಬಾಣಿ ಸಮಾಜದವರು ಎರಡು ದಿನ ಆಚರಿಸುವ ವೈಶಿಷ್ಠು ಹೋಳಿ ಇದು.
ಸಿಹಿ ಅಡುಗೆ
ಗ್ರಾಮದ ಅಂಗಳದಲ್ಲಿ ಹುಗಿದಿದ್ದ ಅಡುಗೆಯ ಹಂಡೆಯನ್ನು ಪುರುಷರು ಹರ ಸಾಹಸ ಮಾಡಿ ತೆಗೆಯುತ್ತಾರೆ ಅಗಲು ಪುರುಷರಿಗೆ ಹೊಡೆತ ಬೀಳುತ್ತವೆ.
ಲಂಬಾಣಿ ಜನಾಂಗದ ಸಂಪ್ರದಾಯ ಕುರಿತು ವಿವರ ನೀಡುವ ಗ್ರಾಮದ ಹಿರಿಯ ನಾಗೇಶ ಪೂಜಾರಿ, ಎರಡು ದಿನಗಳ ಹಿಂದೆ ಹಿರಿಯ ಮುಖಂಡರು ಗ್ರಾಮದ ೧೮ ವರ್ಷದ ಮದುವೆಯಾದಾಗ ಇಬ್ಬರು ಯುವಕರಿಗೆ ಪೇಟಾ, ಧೋತಿ ಸುತ್ತಿ ಅವರಿಗೆ ಗೇರಿಯಾ (ಚಿಕ್ಕ ಯಜಮಾನ) ಎಂದು ನಾಮಕರಣ ಮಾಡುತ್ತಾರೆ. ಚಿಕ್ಕ ಯಜಮಾನರೇ ಕಾಮದಹನ ಮಾಡುತ್ತಾರೆ ಹಾಗೂ ಈ ವರ್ಷದಲ್ಲಿ ಗಂಡು ಮಗು ಜನಿಸಿದ ಮನೆಗೆ ಹಿರಿಯರು ಹೋಗಿ ಬಂಜಾರ ಭಾಷೆಯಲ್ಲಿ ಹಾಡುತ್ತಾ ಶುಭ ಹಾರೈಸಿ ಮನೆಯವರೆಗೆ ಸಿಹಿ ನೀಡಿ ಬರುತ್ತಾರೆ ಎಂದು ಹೇಳಿದರು.

ಕುದಿಯುವ ಎಣ್ಣೆಗೆ ಕೈ ಹಾಕುವ ಯುವಕರು




ವೀರೇಶ ಬಾಗೇವಾಡಿ ವಿಕ ಸುದ್ದಿಲೋಕ
ಕಲಾದಗಿ: ಕುದಿಯುವ ಎಣ್ಣೆಯಲ್ಲಿ ಲಟ್ಟಿಸಿದ ಪೂರಿಗಳನ್ನು ಹಾಕುತ್ತಾರೆ. ಅಲ್ಲಿ ಸೇರಿದ ಯುವಕರು ಬರಿಗೈಯಿಂದ ಸುಡುವ ಎಣ್ಣೆಯಲ್ಲಿರುವ ಪೂರಿಗಳನ್ನು ತೆಗೆಯುತ್ತಾರೆ. ಅವರ ಕೈಗೆ ಯಾವುದೇ ಗಾಯ, ಸುಟ್ಟ ಗುಳ್ಳೆಗಳಾಗುವುದಿಲ್ಲ.
ಒಂದು ವೇಳೆ ಕೈ ಸುಟ್ಟು ಗುಳ್ಳೆಗಳೆದ್ದರೆ ಆತ ಏನೋ ತಪ್ಪು ಮಾಡಿದ್ದಾನೆ ಅಥವಾ ದುರ್ಮಾರ್ಗ ಹಿಡಿದಿದ್ದಾನೆ ಎಂದರ್ಥ.
ಇದೇನು ಯಾವುದೆ ಪವಾಡ ಕಾರ್ಯಕ್ರಮವಲ್ಲ. ಹರಣಶಿಕಾರಿ ಸಮುದಾಯದವರು ಆಚರಿಸುವ ವಿಶಿಷ್ಟ ಹೋಳಿ ಹಬ್ಬವಿದು.
ಸಾಮಾನ್ಯವಾಗಿ ಕಾಮದಹನ ಮಾಡಿ ಒಬ್ಬರಿಗೊಬ್ಬರು ಬಣ್ಣ ಎರಚಿ ಸಂತಸಪಟ್ಟರೆ, ಆದಿವಾಸಿ ಜನಾಂಗವೆಂದು ಗುರುತಿಸಲಾಗಿರುವ ಹರಣಶಿಕಾರಿಗಳು ತಮ್ಮ ಪೂರ್ವಜರು ಹಾಕಿಕೊಟ್ಟ ಪರಂಪರೆಯಂತೆ ಈ ಹಬ್ಬವನ್ನು ತಮ್ಮ ಸಮಾಜದ ಜನ ಸುರಕ್ಷತೆಯಿಂದಿರಲಿ, ಯಾವುದೇ ತಪ್ಪು ಹಾದಿ ತುಳಿಯದಿರಲಿ ಎಂಬ ಸಂದೇಶದೊಂದಿಗೆ ಆಚರಿಸುತ್ತಾರೆ.
ಆದಿವಾಸಿ ಜನಾಂಗದ ಅದೇವತೆ ಆದಿಶಕ್ತಿಯ ವಿಶೇಷ ಪೂಜೆಯನ್ನು ನೆರವೇರಿಸಿ ಹೋಳಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ.
ಹುಣ್ಣಿಮೆಯ ಮರು ದಿನ ತಮ್ಮ ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಪೆಟ್ಟಿಗೆ ಹಾಗೂ ಅದರಲ್ಲಿನ ಬೆಳ್ಳಿಯ ಆದಿಶಕ್ತಿಯ ವಿಗ್ರಹಗಳನ್ನು ಬೆಳಗಿನ ಜಾವ ಹೊರತೆಗೆದು ಪೂಜಿಸಿ ದೇವಿಯ ನೈವೇದ್ಯಗೆಂದು ಪೂರಿ ಅಥವಾ ಸಣ್ಣ ಚಪಾತಿ ಮಾಡಿ ಅವುಗಳನ್ನು ಕಾಯ್ದ ಎಣ್ಣೆಯಲ್ಲಿ ಹಾಕಿ ಬರಿಗೈಯಿಂದ ತೆಗೆಯಲಾಗುತ್ತದೆ. ಹಾಗೆ ತೆಗೆಯುವ ಸಂದರ್ಭದಲ್ಲಿ ಕೈಗಳಿಗೆ ಗುಳ್ಳೆ ಅಥವಾ ಗಾಯಗಳಾದರೆ ಅವರಿಂದ ತಪ್ಪು ಹಾಗೂ ಅನೈತಿಕ ಹಾದಿ ತುಳಿದಿರುವದಾಗಿ ಭಾವಿಸಲಾಗುತ್ತದೆ.
ಆದಿವಾಸಿ ಜನಾಂಗವಾದ ನಮಗೆ ಶಿಕಾರಿ(ಬೇಟೆ)ಯಾಡುವುದೇ ಮುಖ್ಯ ಕಸುಬಾಗಿತ್ತು ಈ ಸಂದರ್ಭದಲ್ಲಿ ಕಾಡುಗಳಲ್ಲಿ ಸಂಚರಿಸುವಾಗ ಪಿಶಾಚಿ ಹಾಗೂ ವನ್ಯ ಮೃಗಗಳಿಂದ ಯಾವುದೇ ತೊಂದರೆಯಾಗದಿರಲಿ ಎಂಬ ನಂಬಿಕೆಯೊಂದಿಗೆ ಹೋಳಿ ಹಬ್ಬದಲ್ಲಿ ಈ ರೀತಿಯ ಸಂಪ್ರದಾಯ ಆಚರಿಸಲಾಗುತ್ತದೆ ಎಂದು ಸಮಾಜದ ದಲ್ಲಪ್ಪ ಪೂಜಾರಿ ಹೇಳುತ್ತಾರೆ.

ಬಾಗಲಕೋಟದಲ್ಲಿ ಬಣ್ಣದ ಹಿನ್ನೀರು !


ಬಾಗಲಕೋಟದಲ್ಲಿ ಗುರುವಾರ ಬಾಲಕಿಯರು ಬಣ್ಣದಾಟದ ಸಂಭ್ರಮದಲ್ಲಿ ಭಾಗವಹಿಸಿದ್ದು ಹೀಗೆ.


ಬಾಗಲಕೋಟದಲ್ಲಿ ಗುರುವಾರ ಹಳಪೇಟೆ ಪ್ರದೇಶದಲ್ಲಿ ಬಣ್ಣದ ಬಂಡಿಯಾಟದ ಸಂಭ್ರಮ.

ವಿಕ ಸುದ್ದಿಲೋಕ
ಬಾಗಲಕೋಟ: ಮುಳುಗಡೆ ನಗರದಲ್ಲಿ ಗುರುವಾರ ಅಕ್ಷರಶಃ ಬಣ್ಣದ ಹಿನ್ನೀರು...!
ಕಾಮದಹನದ ನಂತರ ಬೆಳಗ್ಗೆ ಬಣ್ಣದಾಟಕ್ಕೆ ನಗರದ ಮಕ್ಕಳು, ಮಹಿಳೆಯರು, ಯುವಕರು ಹಾಗೂ ಯುವತಿಯರು ಚಾಲನೆ ನೀಡಿದರು. ಬೆಳಗ್ಗೆಯಿಂದ ಹಳೆಯ ನಗರ, ವಿದ್ಯಾಗಿರಿ ಹಾಗೂ ನವನಗರಗಳಲ್ಲಿ ಹಲಗೆ ವಾದನ, ಬಣ್ಣದಾಟ ಮೇರೆ ಮೀರಿತ್ತು. ಮನೆಗಳಲ್ಲಿದ್ದವರನ್ನು ಹೊರಗೆಳೆದು ತಂದ ಜನರು ಪರಸ್ಪರ ಬಣ್ಣದ ಸಿಂಚನ ನಡೆಸಿ ಸಂಭ್ರಮಿಸಿದರು.
ಮಕ್ಕಳು ಓಣಿ, ಓಣಿಗಳಲ್ಲಿ ಸಂಚರಿಸಿ ಕಂಡ ಕಂಡವರ ಮೇಲೆಲ್ಲ ಬಣ್ಣ ಸಿಂಪಡಿಸಿ ಕೇಕೆ ಹಾಕಿದರೆ, ಯುವಕರು ಬೈಕ್, ಕಾರ್ಗಳಲ್ಲಿ ನಗರದ ತುಂಬೆಲ್ಲ ರಂಗಿನ ಸಂಚಾರ ನಡೆಸಿದರು. ಮೂರು ದಿನಗಳ ಬಣ್ಣದ ಹಬ್ಬದ ಮೊದಲ ದಿನ ಮೀಸಲಾಗಿದ್ದು ಕಿಲ್ಲಾ ಪ್ರದೇಶಕ್ಕೆ. ಸಂಜೆ ಕಿಲ್ಲಾ ಪ್ರದೇಶದಿಂದ ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಹೊರಟ ೨೫ಕ್ಕೂ ಹೆಚ್ಚು ಬಂಡಿಗಳು ಹಬ್ಬದ ಸಂಭ್ರಮ ದುಪ್ಪಟ್ಟುಗೊಳಿಸಿದವು.
ಬಣ್ಣದ ಬಂಡಿಗಳು ಹಳಪೇಟ, ಟೆಂಗಿನಮಠ, ವಲ್ಲಭಭಾಯಿ ವೃತ್ತಗಳಿಗೆ ತೆರಳುತ್ತಿದ್ದಂತೆ ದಾರಿಯುದ್ದಕ್ಕೂ ಜನ ಬಂಡಿಗಳಲ್ಲಿದ್ದವರಿಗೆ ಬಣ್ಣ ಎರಚಿದರು. ಬಣ್ಣಕ್ಕಾಗಿ ಸನ್ನದ್ಧರಾಗಿದ್ದ ಬಂಡಿಗಳಲ್ಲಿದ್ದವರೂ ಮರು ಉತ್ತರ ನೀಡಿದರು. ಜೀಪ್ವೊಂದರಲ್ಲಿ ಬಣ್ಣದ ಬ್ಯಾರಲ್ ತುಂಬಿ ಇತರರಿಗೆ ಎರಚಿದ್ದು ಈ ಬಾರಿಯ ವಿಶೇಷ.
ಬಸವೇಶ್ವರ ಕಾಲೇಜ್ ಎದುರು ಬಂಡಿಗಳು ಆಗಮಿಸುತ್ತಿದ್ದಂತೆ ರಂಗು, ರಂಗಿನ ಅಂತಿಮ ಹೋರಾಟ ನಡೆಯಿತು. ಬಂಡಿಗಳಲ್ಲಿನ ಬಣ್ಣದ ಸಂಗ್ರಹ ಖಾಲಿಯಾದ ನಂತರ ಮೊದಲ ದಿನದ ಬಣ್ಣದಾಟಕ್ಕೆ ರಂಗಿನ ತೆರೆ ಬಿತ್ತು. ಶುಕ್ರವಾರ ಹಳಪೇಟೆ ಪ್ರದೇಶದಲ್ಲಿ ಬಣ್ಣದಾಟ ನಡೆಯಲಿದೆ.
ಬುಧವಾರ ರಾತ್ರಿ ನಡೆದ ಸೋಗಿನ ಬಂಡಿ ಮೆರವಣಿಗೆಯಲ್ಲಿ ಕಿಲ್ಲಾ ಪ್ರದೇಶದ ಯುವಕರು ನಿರ್ಮಿಸಿದ್ದ ಭಯೋತ್ಪಾದಕ ಕಸಬ್ ಬಂಧನದ ಸೋಗು ಎಲ್ಲರ ಗಮನ ಸೆಳೆಯಿತು. ಕಸಬ್, ಆತನನ್ನು ಬಂಸುತ್ತಿರುವ ಸೈನಿಕನ ಸ್ತಬ್ಧ ಚಿತ್ರದ ಸೋಗು ನಗರದಲ್ಲಿ ಸಂಚರಿಸುತ್ತಿದ್ದಂತೆ ಜನ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

ಸಂಭ್ರಮದ ಕಾಮದಹನ, ಇಂದಿನಿಂದ ಬಣ್ಣದಾಟ


ವಿಕ ಸುದ್ದಿಲೋಕ
ಬಾಗಲಕೋಟ: ನಗರದಲ್ಲಿ ಬುಧವಾರ ಕಾಮದಹನದೊಂದಿಗೆ ಹೋಳಿ ಹಬ್ಬದ ಬಣ್ಣದಾಟಕ್ಕೆ ಪರವಾನಿಗೆ ದೊರೆಯಿತು.
ರಾತ್ರಿ ತುರಾಯಿ ಹಲಗೆ ಮೇಳ ಕಾರ್ಯಕ್ರಮದ ನಂತರ ನಿಶಾನೆಗಳೊಂದಿಗೆ ಹಳೆಪೇಟಕ್ಕೆ ತೆರಳಿದ ಯುವಕರು ಖಾತೇದಾರರ ಮನೆಯಿಂದ ಕಿಚ್ಚು ತಂದರು. ಬೆಳಗ್ಗೆ ೩.೩೦ರ ಸುಮಾರಿಗೆ ಕಿಲ್ಲಾ ಪ್ರದೇಶದಲ್ಲಿ ಕಾಮದಹನ ಪ್ರಾರಂಭಗೊಂಡಿತು. ನಂತರ ಅಲ್ಲಿಂದ ಪಡೆದ ಕಿಚ್ಚಿನ ಮೂಲಕ ಹೊಸಪೇಟ, ವೆಂಕಟಪೇಟ ಸೇರಿದಂತೆ ನಾನಾ ಸ್ಥಳಗಳಲ್ಲಿ ಕಾಮಣ್ಣನನ್ನು ದಹಿಸಲಾಯಿತು.
ಕಾಮ ದಹನಕ್ಕೂ ಮುನ್ನ ಸಂಗ್ರಹಿಸಲಾಗಿದ್ದ ಕಟ್ಟಿಗೆಗಳಿಗೆ ಪೂಜೆ, ನೈವೇದ್ಯ ಅರ್ಪಿಸಲಾಯಿತು. ಮಹಿಳೆಯರು ಆರತಿ ಬೆಳಗುವ ಮೂಲಕ ಪೂಜೆ ನೆರವೇರಿಸಿದರು. ಯುವಕರು ಹಲಗೆ ವಾದನ, ಹೊಯ್ಕೊಳ್ಳುವ (ಬೊಬ್ಬೆ ಹೊಡೆಯುವ) ಮೂಲಕ ಕಾಮ ದಹನಕ್ಕೆ ಚಾಲನೆ ನೀಡಿದರು.
ಮಾ.೧೨, ೧೩ ಹಾಗೂ ೧೪ ರಂದು ನಗರದ ಕಿಲ್ಲಾ, ಹಳಪೇಟ, ಹೊಸಪೇಟ, ನವನಗರ ಹಾಗೂ ವಿದ್ಯಾಗಿರಿ ಬಡಾವಣೆಗಳಲ್ಲಿ ಬಣ್ಣದಾಟ ನಡೆಯಲಿದೆ. ಪ್ರತಿ ನಿತ್ಯ ರಾತ್ರಿ ಸೋಗಿನ ಬಂಡಿ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

Wednesday, March 11, 2009

ಬಾಗಲಕೋಟ ಹೋಳಿ ಉತ್ಸವಕ್ಕೆ ಚಾಲನೆ


ಬಾಗಲಕೋಟದಲ್ಲಿ ಮಂಗಳವಾರ ಹೋಳಿ ಉತ್ಸವದಂಗವಾಗಿ ತುರಾಯಿ ಹಲಗೆ ಬಾರಿಸುತ್ತಿರುವ ಯುವಕರು.
ವಿಕ ಸುದ್ದಿಲೋಕ
ಬಾಗಲಕೋಟ: ತುರಾಯಿ ಹಲಗೆ ವಾದನ, ಚಿಣ್ಣರ ನರ್ತನದೊಂದಿಗೆ ಮಂಗಳವಾರ ರಾತ್ರಿ ಹೋಳಿ ಉತ್ಸವ -೨೦೦೯ ಕ್ಕೆ ಚಾಲನೆ ದೊರೆಯಿತು.
ನಗರದ ನಾನಾ ಓಣಿಗಳ ಯುವಕರ ತಂಡಗಳು ತುರಾಯಿ ಹಲಗೆ ಬಾರಿಸುವುದರೊಂದಿಗೆ ಹಬ್ಬದ ಸಂಭ್ರಮಕ್ಕೆ ಕಳೆ ತಂದರು.
ಲಯಬದ್ಧ ಹಲಗೆಯ ತಾಳಕ್ಕೆ ಮಕ್ಕಳು ನರ್ತಿಸಿದರೆ, ಹಿರಿಯರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಉತ್ಸವಕ್ಕೆ ಚಾಲನೆ ನೀಡಿದ ಬಿಟಿಡಿಎ ಅಧ್ಯಕ್ಷ ಲಿಂಗರಾಜ ವಾಲಿ ಮಾತನಾಡಿ, ಹೋಳಿ ಹಬ್ಬ ಯುವಕರಲ್ಲಿ ಪ್ರೋತ್ಸಾಹ ಹಾಗೂ ಸೂರ್ತಿಗೊಳಿಸುತ್ತದೆ. ದೇಶದಲ್ಲಿ ವಿಶಿಷ್ಟವಾಗಿರುವ ಬಾಗಲಕೋಟ ಹೊಳಿ ಹಬ್ಬದ ಗತವೈಭವ ಮರಳಿ ಬಂದಿದೆ ಎಂದರು.
ಯುವ ಮುಖಂಡ ಬಸವಪ್ರಭು ಸರನಾಡಗೌಡ ಮಾತನಾಡಿ, ಕೋಲ್ಕತ್ತಾದಲ್ಲಿ ಹೋಳಿ ಹಬ್ಬ ಕ್ರಮೇಣ ಜನಪ್ರೀಯತೆ ಕಳೆದುಕೊಳ್ಳುತ್ತಿದೆ. ಆದರೆ ಬಾಗಲಕೋಟದಲ್ಲಿ ಹಬ್ಬ ವೈಭವಯುತವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮ ಸಡಗರ ನಿರಂತರವಾಗಿರಲಿ ಎಂದು ಹೇಳಿದರು.
ಜಿ.ಐ.ಬಾಗೇವಾಡಿ ಮಾತನಾಡಿ ಹೋಳಿ ಹಬ್ಬ ಏಕತೆ ಸಂದೇಶ ಸಾರುತ್ತದೆ. ಈ ಹಬ್ಬದ ಮೂಲಕ ಮೂರು ದಿನಗಳವರೆಗೆ ಎಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಿಸಿರಿ ಎಂದರು.
ಟೀಕಿನ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಶೋಕ ಲಿಂಬಾವಳಿ, ಡಾ.ಎಂ.ಎಸ್.ದಡ್ಡೇನ್ನವರ, ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ನಾರಾಯಣಸಾ ಭಾಂಡಗೆ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ವೇದಿಕೆಯಲ್ಲಿದ್ದರು.
ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ ಸ್ವಾಗತಿಸಿದರು. ಉಪಾಧ್ಯಕ್ಷ ಸೋಮಶೇಖರ ಸರಗಣಾಚಾರಿ ನಿರೂಪಿಸಿದರು.




Tuesday, March 10, 2009

ರಾಷ್ಟ್ರ, ರಾಜ್ಯ ಮಟ್ಟದ ಖ್ಯಾತಿ


ಬ್ರಿಟಿಷರ ಕಾಲದಲ್ಲಿ ತಾಲೂಕು ಕಚೇರಿಯಾಗಿದ್ದ ಪಾಣಿ ಮಹಲ್.

ತುರಾಯಿ ಶಹನಾಯಿ ವಾದನ, ನಿಶಾನಿ ಮೆರವಣಿಗೆ
ವಿಕ ಸುದ್ದಿಲೋಕ
ಬಾಗಲಕೋಟ: ನಗರದ ಹೋಳಿ ಹಬ್ಬದ ವಿಶೇಷವೆಂದರೆ ನಿಶಾನಿ, ತುರಾಯಿ ಹಲಗೆ ಹಾಗೂ ಕಾಮದಹನಕ್ಕೆ ಕಿಚ್ಚು ತರುವ ಮೆರವಣಿಗೆ. ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವೂ ಇದೆ.
ಹೋಳಿ ಹುಣ್ಣಿಮೆ ಆಚರಣೆಗೆ ಪೇಶ್ವೆಯರ ಕಾಲದಲ್ಲಿ ನಗರದ ಪ್ರತಿಷ್ಠಿತ ಮನೆತನಗಳಿಗೆ ಬಾಬುದಾರರು ಎಂಬ ವಿಶೇಷ ಅಭಿದಾನವಿತ್ತು. ಹೋಳಿ ಹಬ್ಬ ಆಚರಣೆಗೆ ಈ ಮನೆತನಗಳ ಮೂಲಕ ನಿಶಾನೆ, ತುರಾಯಿ ಹಲಗೆ ಮೆರವಣಿಗೆಯೊಂದಿಗೆ ಕಾಮ ದಹನಕ್ಕೆ ಬೆಂಕಿ ತರುವ ಪದ್ಧತಿ ಬೆಳೆದು ಬಂತು.
ನಗರದ ರಾಮರಾವ್ ಕುಲಕರ್ಣಿ ಅವರ ಮನೆತನ, ಶೆಟ್ಟರ್, ಸರನಾಡಗೌಡ, ದೇಸಾಯಿ ಹಾಗೂ ಖಾತೇದಾರರ ಮನೆತನಗಳು ಬಾಬುದಾರಿಕೆ ಪಡೆದಿವೆ. ಕುಲಕರ್ಣಿ ಅವರ ಮನೆಯಲ್ಲಿ ಪೂಜೆಗೊಳ್ಳುವ ನಿಶಾನೆಗಳು (ರೇಷ್ಮೆ ಬಟ್ಟೆ ಧ್ವಜ ಮಾದರಿ ಲಾಂಛನಗಳು), ತುರಾಯಿ ಹಲಗೆ (ಚಿನ್ನ, ಬೆಳ್ಳಿ ಲೇಪನ ಹಾಗೂ ಅಲಂಕೃತ ಹಲಗೆ)ಗಳು ಸಕಲ ಮರ್ಯಾದೆಯೊಂದಿಗೆ ಎಲ್ಲ ಬಾಬುದಾರರ ಮನೆಗಳಿಗೆ ತೆರಳುತ್ತವೆ. ಎಲ್ಲ ಕಡೆ ಪೂಜೆ ಕೈಗೊಂಡ ನಂತರ ಖಾತೆದಾರರ ಮನೆ ತಲುಪುತ್ತವೆ. ಅಲ್ಲಿ ಬೆಂಕಿ ನೀಡಲು ಚಿಕ್ಕ ಪ್ರೀತಿಯ ಕದನ ನಡೆಯುತ್ತದೆ. ಬೆಂಕಿ ಪಡೆದ ನಂತರ ಕಾಮ ದಹನವಾಗುತ್ತದೆ.
ಸರಕಾರಿ ಗೌರವ
ಕಾಮದಹನಕ್ಕೆ ತೆರಳುವ ಈ ಮೆರವಣಿಗೆಗೆ ಆಗಿನ ಕಾಲದಿಂದಲೂ ಸರಕಾರಿ ಗೌರವ ನೀಡಲಾಗಿದೆ. ಆದಿಲ್ಷಾಹಿ ಕಾಲದಲ್ಲಿ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡ ಕಿಲ್ಲಾ ಪ್ರದೇಶದ ಪಾಣಿಮಹಲ್ ಈ ಮೊದಲು ತಾಲೂಕು ಕಚೇರಿಯಾಗಿತ್ತು. ಈ ಸ್ಥಳದಲ್ಲಿ ನಿಶಾನೆಗಳಿಗೆ ಸರಕಾರದ ವತಿಯಿಂದ ಪೂಜೆ ಸಲ್ಲಿಸಲಾಗುತ್ತಿತ್ತು. ಪಾಣಿ ಮಹಲ್ ಮುಳುಗಡೆಯಾಗಿರುವುದರಿಂದ ಈಗ ಕೊತ್ತಲೇಶ ಗುಡಿ ಸಮೀಪದ ಚಾವಡಿಗೆ ಈ ಪ್ರಕ್ರಿಯೆ ಸ್ಥಳಾಂತರಗೊಂಡಿದೆ.
ಚಿಕ್ಕ ಹಲಗೆ, ದೊಡ್ಡ ಹಲಗೆಗಳೊಂದಿಗೆ ತೆರಳುವ ನಿಶಾನೆಗಳ ಮೆರವಣಿಗೆಯೂ ನಗರದ ಸಂಸ್ಕೃತಿಯ ಪ್ರತೀಕ. ಈ ಮೆರವಣಿಗೆಯ ಮುಂಭಾಗದಲ್ಲಿ ಕಂಬಿ ಸಾಗುತ್ತದೆ. ನಂತರ ಕಣಿ, ಶಹನಾಯಿ, ಚಿಕ್ಕ ಹಲಗೆ ಹಾಗೂ ದೊಡ್ಡ ಹಲಗೆಗಳನ್ನು ನುಡಿಸುತ್ತ ಮೆರವಣಿಗೆ ನಗರದೆಲ್ಲೆಡೆ ಸಂಚರಿಸುತ್ತದೆ. ಮೆರವಣಿಗೆ ನಿರ್ದಿಷ್ಟ ಮಾರ್ಗದಲ್ಲಿಯೇ ಸಂಚರಿಸಬೇಕು ಎಂಬ ನಿಯಮವಿರುವುದರಿಂದ ಬೆಳಗ್ಗೆ ೪ ಗಂಟೆವರೆಗೆ ಕಾಮ ದಹನಕ್ಕೆ ಕಿಚ್ಚು ದೊರೆಯುತ್ತದೆ.
ವಿಶಿಷ್ಟ ಕಲಾ ಪ್ರಕಾರ
ಕೇವಲ ಹೋಳಿ ಹಬ್ಬದ ಆಚರಣೆಗೆ ಹಲಗೆ ತುರಾಯಿ ವಾದನ ಸೀಮಿತವಾಗಿಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ಈ ಕಲಾ ಪ್ರಕಾರಕ್ಕೆ ಮನ್ನಣೆ ದೊರೆತಿದೆ. ೨೦೦೧ರಲ್ಲಿ ದಿಲ್ಲಿಯಲ್ಲಿ ನಡೆದ ಫೂಲ್ವಾಲೋ ಕಿ ಸೈರ್ ಕಾರ್ಯಕ್ರಮದಲ್ಲಿ ಆಗಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಎದುರು ತಂಡ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ.
ಕೇರಳದ ಅಲೆಪ್ಪಿಯಲ್ಲಿ ನಡೆದ ನೆಹರೂ ಬೋಟ್ ರೇಸ್, ಹೈದರಾಬಾದ್ನ ಭಾರತದ ರಾಷ್ಟ್ರೀಯ ಉತ್ಸವಗಳು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗಣರಾಜ್ಯೋತ್ಸವ, ಮೈಸೂರು ದಸರಾ ಸೇರಿದಂತೆ ಬೆಂಗಳೂರು ಹಾಗೂ ಹೈದರಾಬಾದ್ಗಳಲ್ಲಿ ನಡೆದ ರಾಜ್ಯ, ರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ತಂಡಕ್ಕೆ ಪ್ರಶಸ್ತಿ ದೊರೆತಿವೆ. ಬಾಗಲಕೋಟದ ಹೋಳಿ ಜಾತ್ಯತೀತ ಹಾಗೂ ಸಾಮರಸ್ಯ ಮನೋಭಾವಕ್ಕೂ ಸಾಕ್ಷಿ. ಜಾತಿ, ಭೇದಗಳಿಲ್ಲದೆ ಎಲ್ಲ ಸಮಾಜ, ಸಮುದಾಯದವರು ಇಲ್ಲಿ ಹೋಳಿ ಆಚರಿಸುತ್ತಾರೆ. ಪರಿಚಿತರಿರಲಿ, ಅಪರಿಚಿತರಿರಲಿ ಬಣ್ಣದಾಟವಾಡುತ್ತಾರೆ.



ಬ್ರಿಟಿಷರ ಕಾಲದಲ್ಲಿ ತಾಲೂಕು ಕಚೇರಿಯಾಗಿದ್ದ ಪಾಣಿ ಮಹಲ್.

ಮುಳುಗಡೆ ನಗರದಲ್ಲಿ ಬಣ್ಣದ ಪ್ರವಾಹ !


ಬಣ್ಣದ ಬಂಡಿಯಾಟದ ಸಂಭ್ರಮದಲ್ಲಿ ಯುವಕರು.


ವಿಕ ಸುದ್ದಿಲೋಕ
ಬಾಗಲಕೋಟ: ಹೋಳಿ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆ ನಗರದ ಯುವಕರ ಕಾತರವೂ ಹೆಚ್ಚುತ್ತದೆ. ಬಂಡಿ ಬಣ್ಣದಾಟಕ್ಕಾಗಿ ಪೈಪೋಟಿಯೂ ಪ್ರಾರಂಭವಾಗುತ್ತದೆ.
ಇಲ್ಲಿನ ಬಣ್ಣದ ಬಂಡಿಗಳ ಯುದ್ಧ ಆಡುವವರಷ್ಟೇ ನೋಡುವವರಿಗೂ ಪ್ರೀತಿ. ಮೂರು ಓಣಿಗಳ ಸಾವಿರಾರು ಯುವಕರು ೫೦ಕ್ಕೂ ಹೆಚ್ಚು ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಪರಸ್ಪರ ಎರಚಾಟ ನಡೆಸುವುದು ಯಾವ ಮಹಾಯುದ್ಧಕ್ಕೂ ಕಮ್ಮಿಯಲ್ಲ.
ನೂರಾರು ವರ್ಷಗಳಿಂದ ನಗರದಲ್ಲಿರುವ ಈ ಸಂಪ್ರದಾಯದಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಗಳಾಗಿವೆ. ಆದರೆ ಯುವಕರಲ್ಲಿ ಉತ್ಸಾಹ, ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಹಳೆಯ ನಗರದ ಬಹು ಭಾಗ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಪರಿಣಾಮ ನವನಗರ, ವಿದ್ಯಾಗಿರಿ ಹಾಗೂ ಹಳೆಯ ನಗರಗಳಾಗಿ ಮೂರು ಪ್ರದೇಶಗಳು ವಿಂಗಡಣೆಯಾಗಿವೆ. ಹಳೆಯ ನಗರದಲ್ಲಿನ ಸಾವಿರಾರು ಜನ ನವನಗರದಲ್ಲಿ ನೆಲೆಸಿದ್ದಾರೆ. ಆದರೆ ಹೋಳಿ ಹಬ್ಬಕ್ಕೆ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ.
ಈ ಬಾರಿ ೧೨ರಂದು ಕಿಲ್ಲಾ ಓಣಿಯ ಬಣ್ಣದ ಬಂಡಿಯಾಟ ನಡೆಯಲಿದ್ದು ಹೊಸಪೇಟೆ, ಹಳೆ ಪೇಟೆ, ಜೈನ ಪೇಟೆಯಲ್ಲಿ ಬಣ್ಣಗಳ ಸಮರ ನಡೆಯಲಿದೆ. ೧೩ ರಂದು ಹಳೆಪೇಟೆ, ವೆಂಕಟಪೇಟೆ, ಜೈನಪೇಟೆಗಳು ರಂಗಿನಾಟಕ್ಕೆ ಸಾಕ್ಷಿಯಾಗಲಿದ್ದರೆ, ೧೪ ರಂದು ಹೊಸಪೇಟೆ ಬಣ್ಣಗಳ ಸಾಗರದಲ್ಲಿ ತೇಲಲಿದೆ.
ಪ್ರತಿ ದಿನ ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಬಣ್ಣದ ಬಂಡಿಗಳ ಆಟಕ್ಕೆ ಕ್ರೀಡಾಂಗಣ ಸಿದ್ಧವಾಗುತ್ತದೆ. ರಸ್ತೆಗಳು, ಗಲ್ಲಿಗಳ ಕಿರಿದಾದ ವೃತ್ತಗಳು, ಮನೆಗಳ ಮಾಳಿಗೆ ಹಾಗೂ ಕಟ್ಟೆಗಳು ಬಣ್ಣದ ಸಂಗ್ರಹಾಗಾರಗಳು. ಬಣ್ಣದ ಬಂಡಿಗಳು ಸಂಚರಿಸುವ ಪ್ರತಿ ರಸ್ತೆಯ ಅಕ್ಕ ಪಕ್ಕ ಬ್ಯಾರಲ್ಗಳಲ್ಲಿ ಬಣ್ಣ ಶೇಖರಿಸಿಟ್ಟಿಕೊಂಡ ಯುವಕರು ಬಂಡಿಗಳಿಗಾಗಿ ಕಾಯ್ದು ಕುಳಿತಿರುತ್ತಾರೆ.
ಅತ್ತ ಬಣ್ಣದ ಬಂಡಿಗಳು ಹೊರಟಿವೆ ಎಂಬ ಸುದ್ದಿ ದೊರೆಯುತ್ತಲೆ ಇತ್ತ ಸಮರಕ್ಕಾಗಿ ತಯಾರಿ ಪೂರ್ಣಗೊಳ್ಳುತ್ತದೆ. ಮನೆಗಳ ಮಾಳಿಗೆ, ರಸ್ತೆ ಬದಿ ಹಾಗೂ ಆಯಕಟ್ಟಿನ ಸ್ಥಳದಲ್ಲಿ ರಂಗಿನಾಟ ನೋಡಲು ಸಾವಿರಾರು ಪ್ರೇಕ್ಷಕರು ಸಿದ್ಧರಾಗಿರುತ್ತಾರೆ. ಬಂಡಿಗಳಲ್ಲಿ ನಿಂತಿರುವ ಯುವಕರು ಚೊಂಬು, ದೊಡ್ಡ ತಂಬಿಗೆಗಳಲ್ಲಿ ಬಣ್ಣ ತುಂಬಿಸಿಕೊಂಡು ಸಿದ್ಧರಾಗುತ್ತಾರೆ.
ಓಣಿಯೊಂದರಲ್ಲಿ ಬಂಡಿ ಪ್ರವೇಶಿಸುತ್ತಿದ್ದಂತೆ ನಾಲ್ಕು ದಿಕ್ಕಿನಿಂದ ಅಕ್ಷರಶಃ ಬಣ್ಣಗಳ ಮಳೆ. ಬಣ್ಣದಿಂದ ತಪ್ಪಿಸಿಕೊಂಡು ಎದುರುತ್ತರ ನೀಡುವಷ್ಟರಲ್ಲಿ ಮತ್ತೊಂದು ಸ್ಥಳದಿಂದ ಆಕ್ರಮಣ ನಡೆಯುತ್ತದೆ. ಯುವಕರಷ್ಟೇ ಅಲ್ಲ ಚಿಣ್ಣರೂ ಆಟದಲ್ಲಿ ರಂಗಿನ ಸೇನಾನಿಗಳಾಗಿರುತ್ತಾರೆ. ಪುಟ್ಟ ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಬಣ್ಣ ತುಂಬಿಸಿಕೊಂಡ ಮಕ್ಕಳು ಬಂಡಿಗಳತ್ತ ಗುರಿಯಿಡುತ್ತಾರೆ.
ಕೆಲವು ಚತುರ ಯುವಕರು ಬಂಡಿಯಲ್ಲಿ ಬಣ್ಣದ ಸಂಗ್ರಹ ಮುಗಿಯುವುದನ್ನೇ ಕಾಯುತ್ತಾರೆ. ಬಂಡಿಯವರ ಬಣ್ಣ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಅವಿತಿಟ್ಟ ಬ್ಯಾರಲ್ಗಳಿಂದ ಭರ್ಜರಿ ದಾಳಿ ನಡೆಯುತ್ತದೆ. ದಾಳಿಯಿಂದ ಪಾರಾಗಲು ಕೆಲ ಸಂದರ್ಭಗಳಲ್ಲಿ ಕನ್ನಡಕ, ರಟ್ಟಿನ ತುಣುಕುಗಳನ್ನೂ ಬಳಸಲಾಗುತ್ತದೆ. ಬಂಡಿಗಳಿಗೆ ಬೇವಿನ ಎಲೆಗಳ ಅಲಂಕಾರವೂ ಇರುತ್ತದೆ. ಎಲ್ಲ ಓಣಿಗಳಲ್ಲಿ ಬಂಡಿಗಳು ಹಾಯ್ದು ಬವಿವ ಸಂಘದ ಹತ್ತಿರ ಸೇರುತ್ತಿದ್ದಂತೆ ಮತ್ತೊಮ್ಮೆ ಬಹಿರಂಗ ಬಣ್ಣದಾಟ ನಡೆಯುತ್ತದೆ. ಎಲ್ಲ ಬ್ಯಾರಲ್ಗಳಲ್ಲಿ ಬಣ್ಣ ಮುಗಿಯುತ್ತಿದ್ದಂತೆ ವರ್ಷದ ಬಣ್ಣದಾಟಕ್ಕೆ ರಂಗಿನ ತೆರೆ.
ಬೇರೆ ಪ್ರದೇಶಗಳಲ್ಲಿ ನೆಲೆಸಿರುವ ಯುವಕರು ಮೂರು ದಿನವೂ ಬಣ್ಣವಾಡುವುದು ಹೋಳಿ ಪ್ರೀತಿಗೆ ಉದಾಹರಣೆ. ಮೂರು ದಿನದ ರಂಗಿನಾಟದಿಂದ ನಗರದ ತುಂಬೆಲ್ಲ ಬಣ್ಣಗಳ ಸಾಮ್ರಾಜ್ಯ. ಮತ್ತೆ ಮುಂದಿನ ವರ್ಷ ಬಣ್ಣ ಆಡೋಣು ಎಂಬ ಭಾವನೆಯೊಂದಿಗೆ ಯುವಕರು ಮನೆಗಳತ್ತ ತೆರಳುತ್ತಾರೆ.
















ಗುಡಿಸಲೇ ಸರ್ವಸ್ವ... ತನ್ನ ಭವ್ಯ ಮಹಲಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಗೋದುಬಾಯಿ.



ಒಮ್ಮೆ ಕೇಳಿ `ಅಮ್ಮಾ ಹೇಗಿದ್ದೀಯಾ' ಎಂದು
ಶಿವಶಂಕರ ಹಿರೇಮಠ ವಿಕ ಸುದ್ದಿಲೋಕ
ತಾಳಿಕೋಟೆ: ಈ ಅಜ್ಜಿಗೆ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ. ವಿಶ್ವವೇ ಮಹಿಳಾ ದಿನಾಚರಣೆ ಎದುರು ನೋಡುತ್ತಿರುವಾಗ ಶತಾಯುಷಿಯಾಗಲಿರುವ ೯೮ವರ್ಷದ ಹಣ್ಣು ಹಣ್ಣು ಮುದುಕಿ ಗೋದುಬಾಯಿ ತನ್ನ ಬಾಳಸಂಜೆಯನ್ನು ಅತ್ಯಂತ ಯಾತನಾಮಯವಾಗಿ ಕಳೆಯತ್ತಿದ್ದಾಳೆ. ಆದರೆ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ.
ನಗರದ `ಅಮೀರ 'ಚಿತ್ರಮಂದಿರದ ಹಿಂದೆ ಈ `ಗರೀಬ್'ಳ ಗುಡಿಸಲೆಂಬ ಮನೆ. ಹರಕು ಚಾಪೆ, ಮುಳ್ಳಿನ ಕಂಟಿಗಳಿಂದ ತಾನೆ ನಿರ್ಮಿಸಿಕೊಂಡ ಗುಡಿಸಲಿನಲ್ಲಿ ಬದುಕು ನೂಕುತ್ತಿದ್ದಾಳೆ. ಚಳಿ, ಬಿಸಿಲು ಗಾಳಿ, ಮಳೆ ಎಲ್ಲದಕ್ಕೂ ಅವಳಿಗೆ ಗುಡಿಸಲೇ ಆಶ್ರಯ. ಹೆತ್ತ ಮಗನೇ ಗೋದುಬಾಯಿಯನ್ನು ಬೆತ್ತದಿಂದ ಹೊಡೆದು ಹಾಕಿದ್ದಾನೆಂದರೆ ಆತ ಎಷ್ಟು ನಿಷ್ಕರುಣಿ ಇರಬಹುದು. ಇಂತಹ ನರಕಯಾತನೆ ಅನುಭವಿಸುವ ಬದಲು ಆತ್ಮಹತ್ಯೆಯೇ ದಾರಿಯೆಂದು ಅಜ್ಜಿ ನಿರ್ಣಯಿಸಿದ್ದಳು. ಆದರೆ ಸಂಬಂಕರು ತಾವು ಸಾಕುವುದಾಗಿ ಹೇಳಿ ತಾಳಿಕೋಟೆಗೆ ಕರೆದುಕೊಂಡು ಬಂದು ನಾಪತ್ತೆಯಾಗಿದ್ದಾರೆ. ಆದರೆ ಧೃತಿಗೆಡದ ವೃದ್ಧೆ ಬದುಕಿನ ಕೊನೆ ದಿನಗಳನ್ನು ಸವಾಲಿನಂತೆ ಸ್ವೀಕರಿಸಿದ್ದು ಗಮನಾರ್ಹ.
ಬುದುಕು-ಬವಣೆ
ಯಾವುದೇ ಪಾತ್ರೆ ಪಗಡಗಳಿಲ್ಲ, ಹಾಸಿಗೆಯಿಲ್ಲ, ಮನೆಗೆ ಬಾಗಿಲು ಇಲ್ಲ, ಉಡಲು ಬಟ್ಟೆಗಳಿಲ್ಲ, ಯಾರಾದರೂ ಹೆಚ್ಚಿಗೆ ಹಣ ನೀಡಿದರೆ ನನಗೇಕೆ ಬೇಕು ಹಣ ಎಂದು ಮರಳಿಕೊಡುತ್ತಾಳೆ.
ಹಂದಿ ನಾಯಿಗಳೇ ಸ್ನೇಹಿತರು
ಬಾಗಿಲು ಇಲ್ಲದ ಮನೆಯಲ್ಲಿ ಗೋದುಬಾಯಿ ನಿತ್ಯ ತಾನು ಭಿಕ್ಷೆ ಬೇಡಿ ತಂದ ಅನ್ನವನ್ನು ಹಂದಿ ನಾಯಿಗಳ ಜತೆ ಹಂಚಿಕೊಂಡು ತಿನ್ನುತ್ತಾಳೆ.
ಯಾರಾದರೂ ಹೀಗೇಕೆ ಎಂದು ಪ್ರಶ್ನಿಸಿದರೆ ಗೋದುಬಾಯಿ ನೊಂದು ನುಡಿಯುವುದು ಹೀಗೆ.. ನನಗಂತೂ ಯಾರೂ ಇಲ್ಲರಿ ಮಗ ಸತ್ತಾನ, ಸಂಬಂಕರು ನನ್ನ ಸಮೀಪ ಬರುದಿಲ್ರಿ, ಸಮಾಜದ ಜನ ಒಂದಿಷ್ಟೂ ಸಹಾಯಕ್ಕ ಬಂದಿಲ್ರಿ, ಅದಕ್ಕ ನಾಯಿ ಹಂದಿ ಜತೆ ಆರಾಮಾಗಿ ಅದಿನ್ರಿ...ಎನ್ನುತ್ತಾಳೆ.
ಬೇಕಿದೆ ಆಸರೆ
ಆಸರೆ ನಿರೀಕ್ಷೆಯಲ್ಲಿರುವ ಕಣ್ಣುಗಳು ಬತ್ತಿಹೋಗಿವೆ. ಎಲ್ಲಿವೆ ವೃದ್ಧಾಶ್ರಮ, ಇಂಥಾ ಮಕ್ಕಳನ್ನು ಏಕೆ ಹೆರಬೇಕು ? ಎಂಬ ಪ್ರಶ್ನೆಗಳು ಕೇಳತೊಡಗಿವೆ. ಮಹಿಳಾ ಸಂಘಟನೆಗಳು ಅದ್ಧೂರಿಯಿಂದ ಮಹಿಳಾ ದಿನ ಆಚರಿಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುವ ಬದಲು ೯೮ ವಯಸ್ಸಿನ ಗೋದುಬಾಯಿಯ ಗುಡಿಸಲಿನಲ್ಲಿ ಒಮ್ಮೆ ಇಣುಕಿ `ಅಮ್ಮಾ ಹೇಗಿದ್ದಿ' ಎಂದು ಕೇಳಿದರೆ ಸಾಕು ವಿಶ್ವ ಮಹಿಳಾ ದಿನಾಚರಣೆ ಸಾರ್ಥಕವಾದಂತೆ.