Tuesday, March 10, 2009















ಗುಡಿಸಲೇ ಸರ್ವಸ್ವ... ತನ್ನ ಭವ್ಯ ಮಹಲಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಗೋದುಬಾಯಿ.



ಒಮ್ಮೆ ಕೇಳಿ `ಅಮ್ಮಾ ಹೇಗಿದ್ದೀಯಾ' ಎಂದು
ಶಿವಶಂಕರ ಹಿರೇಮಠ ವಿಕ ಸುದ್ದಿಲೋಕ
ತಾಳಿಕೋಟೆ: ಈ ಅಜ್ಜಿಗೆ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ. ವಿಶ್ವವೇ ಮಹಿಳಾ ದಿನಾಚರಣೆ ಎದುರು ನೋಡುತ್ತಿರುವಾಗ ಶತಾಯುಷಿಯಾಗಲಿರುವ ೯೮ವರ್ಷದ ಹಣ್ಣು ಹಣ್ಣು ಮುದುಕಿ ಗೋದುಬಾಯಿ ತನ್ನ ಬಾಳಸಂಜೆಯನ್ನು ಅತ್ಯಂತ ಯಾತನಾಮಯವಾಗಿ ಕಳೆಯತ್ತಿದ್ದಾಳೆ. ಆದರೆ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ.
ನಗರದ `ಅಮೀರ 'ಚಿತ್ರಮಂದಿರದ ಹಿಂದೆ ಈ `ಗರೀಬ್'ಳ ಗುಡಿಸಲೆಂಬ ಮನೆ. ಹರಕು ಚಾಪೆ, ಮುಳ್ಳಿನ ಕಂಟಿಗಳಿಂದ ತಾನೆ ನಿರ್ಮಿಸಿಕೊಂಡ ಗುಡಿಸಲಿನಲ್ಲಿ ಬದುಕು ನೂಕುತ್ತಿದ್ದಾಳೆ. ಚಳಿ, ಬಿಸಿಲು ಗಾಳಿ, ಮಳೆ ಎಲ್ಲದಕ್ಕೂ ಅವಳಿಗೆ ಗುಡಿಸಲೇ ಆಶ್ರಯ. ಹೆತ್ತ ಮಗನೇ ಗೋದುಬಾಯಿಯನ್ನು ಬೆತ್ತದಿಂದ ಹೊಡೆದು ಹಾಕಿದ್ದಾನೆಂದರೆ ಆತ ಎಷ್ಟು ನಿಷ್ಕರುಣಿ ಇರಬಹುದು. ಇಂತಹ ನರಕಯಾತನೆ ಅನುಭವಿಸುವ ಬದಲು ಆತ್ಮಹತ್ಯೆಯೇ ದಾರಿಯೆಂದು ಅಜ್ಜಿ ನಿರ್ಣಯಿಸಿದ್ದಳು. ಆದರೆ ಸಂಬಂಕರು ತಾವು ಸಾಕುವುದಾಗಿ ಹೇಳಿ ತಾಳಿಕೋಟೆಗೆ ಕರೆದುಕೊಂಡು ಬಂದು ನಾಪತ್ತೆಯಾಗಿದ್ದಾರೆ. ಆದರೆ ಧೃತಿಗೆಡದ ವೃದ್ಧೆ ಬದುಕಿನ ಕೊನೆ ದಿನಗಳನ್ನು ಸವಾಲಿನಂತೆ ಸ್ವೀಕರಿಸಿದ್ದು ಗಮನಾರ್ಹ.
ಬುದುಕು-ಬವಣೆ
ಯಾವುದೇ ಪಾತ್ರೆ ಪಗಡಗಳಿಲ್ಲ, ಹಾಸಿಗೆಯಿಲ್ಲ, ಮನೆಗೆ ಬಾಗಿಲು ಇಲ್ಲ, ಉಡಲು ಬಟ್ಟೆಗಳಿಲ್ಲ, ಯಾರಾದರೂ ಹೆಚ್ಚಿಗೆ ಹಣ ನೀಡಿದರೆ ನನಗೇಕೆ ಬೇಕು ಹಣ ಎಂದು ಮರಳಿಕೊಡುತ್ತಾಳೆ.
ಹಂದಿ ನಾಯಿಗಳೇ ಸ್ನೇಹಿತರು
ಬಾಗಿಲು ಇಲ್ಲದ ಮನೆಯಲ್ಲಿ ಗೋದುಬಾಯಿ ನಿತ್ಯ ತಾನು ಭಿಕ್ಷೆ ಬೇಡಿ ತಂದ ಅನ್ನವನ್ನು ಹಂದಿ ನಾಯಿಗಳ ಜತೆ ಹಂಚಿಕೊಂಡು ತಿನ್ನುತ್ತಾಳೆ.
ಯಾರಾದರೂ ಹೀಗೇಕೆ ಎಂದು ಪ್ರಶ್ನಿಸಿದರೆ ಗೋದುಬಾಯಿ ನೊಂದು ನುಡಿಯುವುದು ಹೀಗೆ.. ನನಗಂತೂ ಯಾರೂ ಇಲ್ಲರಿ ಮಗ ಸತ್ತಾನ, ಸಂಬಂಕರು ನನ್ನ ಸಮೀಪ ಬರುದಿಲ್ರಿ, ಸಮಾಜದ ಜನ ಒಂದಿಷ್ಟೂ ಸಹಾಯಕ್ಕ ಬಂದಿಲ್ರಿ, ಅದಕ್ಕ ನಾಯಿ ಹಂದಿ ಜತೆ ಆರಾಮಾಗಿ ಅದಿನ್ರಿ...ಎನ್ನುತ್ತಾಳೆ.
ಬೇಕಿದೆ ಆಸರೆ
ಆಸರೆ ನಿರೀಕ್ಷೆಯಲ್ಲಿರುವ ಕಣ್ಣುಗಳು ಬತ್ತಿಹೋಗಿವೆ. ಎಲ್ಲಿವೆ ವೃದ್ಧಾಶ್ರಮ, ಇಂಥಾ ಮಕ್ಕಳನ್ನು ಏಕೆ ಹೆರಬೇಕು ? ಎಂಬ ಪ್ರಶ್ನೆಗಳು ಕೇಳತೊಡಗಿವೆ. ಮಹಿಳಾ ಸಂಘಟನೆಗಳು ಅದ್ಧೂರಿಯಿಂದ ಮಹಿಳಾ ದಿನ ಆಚರಿಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುವ ಬದಲು ೯೮ ವಯಸ್ಸಿನ ಗೋದುಬಾಯಿಯ ಗುಡಿಸಲಿನಲ್ಲಿ ಒಮ್ಮೆ ಇಣುಕಿ `ಅಮ್ಮಾ ಹೇಗಿದ್ದಿ' ಎಂದು ಕೇಳಿದರೆ ಸಾಕು ವಿಶ್ವ ಮಹಿಳಾ ದಿನಾಚರಣೆ ಸಾರ್ಥಕವಾದಂತೆ.

No comments:

Post a Comment