Thursday, March 12, 2009

ಬಾಗಲಕೋಟದಲ್ಲಿ ಬಣ್ಣದ ಹಿನ್ನೀರು !


ಬಾಗಲಕೋಟದಲ್ಲಿ ಗುರುವಾರ ಬಾಲಕಿಯರು ಬಣ್ಣದಾಟದ ಸಂಭ್ರಮದಲ್ಲಿ ಭಾಗವಹಿಸಿದ್ದು ಹೀಗೆ.


ಬಾಗಲಕೋಟದಲ್ಲಿ ಗುರುವಾರ ಹಳಪೇಟೆ ಪ್ರದೇಶದಲ್ಲಿ ಬಣ್ಣದ ಬಂಡಿಯಾಟದ ಸಂಭ್ರಮ.

ವಿಕ ಸುದ್ದಿಲೋಕ
ಬಾಗಲಕೋಟ: ಮುಳುಗಡೆ ನಗರದಲ್ಲಿ ಗುರುವಾರ ಅಕ್ಷರಶಃ ಬಣ್ಣದ ಹಿನ್ನೀರು...!
ಕಾಮದಹನದ ನಂತರ ಬೆಳಗ್ಗೆ ಬಣ್ಣದಾಟಕ್ಕೆ ನಗರದ ಮಕ್ಕಳು, ಮಹಿಳೆಯರು, ಯುವಕರು ಹಾಗೂ ಯುವತಿಯರು ಚಾಲನೆ ನೀಡಿದರು. ಬೆಳಗ್ಗೆಯಿಂದ ಹಳೆಯ ನಗರ, ವಿದ್ಯಾಗಿರಿ ಹಾಗೂ ನವನಗರಗಳಲ್ಲಿ ಹಲಗೆ ವಾದನ, ಬಣ್ಣದಾಟ ಮೇರೆ ಮೀರಿತ್ತು. ಮನೆಗಳಲ್ಲಿದ್ದವರನ್ನು ಹೊರಗೆಳೆದು ತಂದ ಜನರು ಪರಸ್ಪರ ಬಣ್ಣದ ಸಿಂಚನ ನಡೆಸಿ ಸಂಭ್ರಮಿಸಿದರು.
ಮಕ್ಕಳು ಓಣಿ, ಓಣಿಗಳಲ್ಲಿ ಸಂಚರಿಸಿ ಕಂಡ ಕಂಡವರ ಮೇಲೆಲ್ಲ ಬಣ್ಣ ಸಿಂಪಡಿಸಿ ಕೇಕೆ ಹಾಕಿದರೆ, ಯುವಕರು ಬೈಕ್, ಕಾರ್ಗಳಲ್ಲಿ ನಗರದ ತುಂಬೆಲ್ಲ ರಂಗಿನ ಸಂಚಾರ ನಡೆಸಿದರು. ಮೂರು ದಿನಗಳ ಬಣ್ಣದ ಹಬ್ಬದ ಮೊದಲ ದಿನ ಮೀಸಲಾಗಿದ್ದು ಕಿಲ್ಲಾ ಪ್ರದೇಶಕ್ಕೆ. ಸಂಜೆ ಕಿಲ್ಲಾ ಪ್ರದೇಶದಿಂದ ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಹೊರಟ ೨೫ಕ್ಕೂ ಹೆಚ್ಚು ಬಂಡಿಗಳು ಹಬ್ಬದ ಸಂಭ್ರಮ ದುಪ್ಪಟ್ಟುಗೊಳಿಸಿದವು.
ಬಣ್ಣದ ಬಂಡಿಗಳು ಹಳಪೇಟ, ಟೆಂಗಿನಮಠ, ವಲ್ಲಭಭಾಯಿ ವೃತ್ತಗಳಿಗೆ ತೆರಳುತ್ತಿದ್ದಂತೆ ದಾರಿಯುದ್ದಕ್ಕೂ ಜನ ಬಂಡಿಗಳಲ್ಲಿದ್ದವರಿಗೆ ಬಣ್ಣ ಎರಚಿದರು. ಬಣ್ಣಕ್ಕಾಗಿ ಸನ್ನದ್ಧರಾಗಿದ್ದ ಬಂಡಿಗಳಲ್ಲಿದ್ದವರೂ ಮರು ಉತ್ತರ ನೀಡಿದರು. ಜೀಪ್ವೊಂದರಲ್ಲಿ ಬಣ್ಣದ ಬ್ಯಾರಲ್ ತುಂಬಿ ಇತರರಿಗೆ ಎರಚಿದ್ದು ಈ ಬಾರಿಯ ವಿಶೇಷ.
ಬಸವೇಶ್ವರ ಕಾಲೇಜ್ ಎದುರು ಬಂಡಿಗಳು ಆಗಮಿಸುತ್ತಿದ್ದಂತೆ ರಂಗು, ರಂಗಿನ ಅಂತಿಮ ಹೋರಾಟ ನಡೆಯಿತು. ಬಂಡಿಗಳಲ್ಲಿನ ಬಣ್ಣದ ಸಂಗ್ರಹ ಖಾಲಿಯಾದ ನಂತರ ಮೊದಲ ದಿನದ ಬಣ್ಣದಾಟಕ್ಕೆ ರಂಗಿನ ತೆರೆ ಬಿತ್ತು. ಶುಕ್ರವಾರ ಹಳಪೇಟೆ ಪ್ರದೇಶದಲ್ಲಿ ಬಣ್ಣದಾಟ ನಡೆಯಲಿದೆ.
ಬುಧವಾರ ರಾತ್ರಿ ನಡೆದ ಸೋಗಿನ ಬಂಡಿ ಮೆರವಣಿಗೆಯಲ್ಲಿ ಕಿಲ್ಲಾ ಪ್ರದೇಶದ ಯುವಕರು ನಿರ್ಮಿಸಿದ್ದ ಭಯೋತ್ಪಾದಕ ಕಸಬ್ ಬಂಧನದ ಸೋಗು ಎಲ್ಲರ ಗಮನ ಸೆಳೆಯಿತು. ಕಸಬ್, ಆತನನ್ನು ಬಂಸುತ್ತಿರುವ ಸೈನಿಕನ ಸ್ತಬ್ಧ ಚಿತ್ರದ ಸೋಗು ನಗರದಲ್ಲಿ ಸಂಚರಿಸುತ್ತಿದ್ದಂತೆ ಜನ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

No comments:

Post a Comment