Tuesday, March 10, 2009

ಮುಳುಗಡೆ ನಗರದಲ್ಲಿ ಬಣ್ಣದ ಪ್ರವಾಹ !


ಬಣ್ಣದ ಬಂಡಿಯಾಟದ ಸಂಭ್ರಮದಲ್ಲಿ ಯುವಕರು.


ವಿಕ ಸುದ್ದಿಲೋಕ
ಬಾಗಲಕೋಟ: ಹೋಳಿ ಹಬ್ಬಕ್ಕೆ ಚಾಲನೆ ದೊರೆಯುತ್ತಿದ್ದಂತೆ ನಗರದ ಯುವಕರ ಕಾತರವೂ ಹೆಚ್ಚುತ್ತದೆ. ಬಂಡಿ ಬಣ್ಣದಾಟಕ್ಕಾಗಿ ಪೈಪೋಟಿಯೂ ಪ್ರಾರಂಭವಾಗುತ್ತದೆ.
ಇಲ್ಲಿನ ಬಣ್ಣದ ಬಂಡಿಗಳ ಯುದ್ಧ ಆಡುವವರಷ್ಟೇ ನೋಡುವವರಿಗೂ ಪ್ರೀತಿ. ಮೂರು ಓಣಿಗಳ ಸಾವಿರಾರು ಯುವಕರು ೫೦ಕ್ಕೂ ಹೆಚ್ಚು ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಪರಸ್ಪರ ಎರಚಾಟ ನಡೆಸುವುದು ಯಾವ ಮಹಾಯುದ್ಧಕ್ಕೂ ಕಮ್ಮಿಯಲ್ಲ.
ನೂರಾರು ವರ್ಷಗಳಿಂದ ನಗರದಲ್ಲಿರುವ ಈ ಸಂಪ್ರದಾಯದಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಗಳಾಗಿವೆ. ಆದರೆ ಯುವಕರಲ್ಲಿ ಉತ್ಸಾಹ, ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಹಳೆಯ ನಗರದ ಬಹು ಭಾಗ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಪರಿಣಾಮ ನವನಗರ, ವಿದ್ಯಾಗಿರಿ ಹಾಗೂ ಹಳೆಯ ನಗರಗಳಾಗಿ ಮೂರು ಪ್ರದೇಶಗಳು ವಿಂಗಡಣೆಯಾಗಿವೆ. ಹಳೆಯ ನಗರದಲ್ಲಿನ ಸಾವಿರಾರು ಜನ ನವನಗರದಲ್ಲಿ ನೆಲೆಸಿದ್ದಾರೆ. ಆದರೆ ಹೋಳಿ ಹಬ್ಬಕ್ಕೆ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ.
ಈ ಬಾರಿ ೧೨ರಂದು ಕಿಲ್ಲಾ ಓಣಿಯ ಬಣ್ಣದ ಬಂಡಿಯಾಟ ನಡೆಯಲಿದ್ದು ಹೊಸಪೇಟೆ, ಹಳೆ ಪೇಟೆ, ಜೈನ ಪೇಟೆಯಲ್ಲಿ ಬಣ್ಣಗಳ ಸಮರ ನಡೆಯಲಿದೆ. ೧೩ ರಂದು ಹಳೆಪೇಟೆ, ವೆಂಕಟಪೇಟೆ, ಜೈನಪೇಟೆಗಳು ರಂಗಿನಾಟಕ್ಕೆ ಸಾಕ್ಷಿಯಾಗಲಿದ್ದರೆ, ೧೪ ರಂದು ಹೊಸಪೇಟೆ ಬಣ್ಣಗಳ ಸಾಗರದಲ್ಲಿ ತೇಲಲಿದೆ.
ಪ್ರತಿ ದಿನ ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಬಣ್ಣದ ಬಂಡಿಗಳ ಆಟಕ್ಕೆ ಕ್ರೀಡಾಂಗಣ ಸಿದ್ಧವಾಗುತ್ತದೆ. ರಸ್ತೆಗಳು, ಗಲ್ಲಿಗಳ ಕಿರಿದಾದ ವೃತ್ತಗಳು, ಮನೆಗಳ ಮಾಳಿಗೆ ಹಾಗೂ ಕಟ್ಟೆಗಳು ಬಣ್ಣದ ಸಂಗ್ರಹಾಗಾರಗಳು. ಬಣ್ಣದ ಬಂಡಿಗಳು ಸಂಚರಿಸುವ ಪ್ರತಿ ರಸ್ತೆಯ ಅಕ್ಕ ಪಕ್ಕ ಬ್ಯಾರಲ್ಗಳಲ್ಲಿ ಬಣ್ಣ ಶೇಖರಿಸಿಟ್ಟಿಕೊಂಡ ಯುವಕರು ಬಂಡಿಗಳಿಗಾಗಿ ಕಾಯ್ದು ಕುಳಿತಿರುತ್ತಾರೆ.
ಅತ್ತ ಬಣ್ಣದ ಬಂಡಿಗಳು ಹೊರಟಿವೆ ಎಂಬ ಸುದ್ದಿ ದೊರೆಯುತ್ತಲೆ ಇತ್ತ ಸಮರಕ್ಕಾಗಿ ತಯಾರಿ ಪೂರ್ಣಗೊಳ್ಳುತ್ತದೆ. ಮನೆಗಳ ಮಾಳಿಗೆ, ರಸ್ತೆ ಬದಿ ಹಾಗೂ ಆಯಕಟ್ಟಿನ ಸ್ಥಳದಲ್ಲಿ ರಂಗಿನಾಟ ನೋಡಲು ಸಾವಿರಾರು ಪ್ರೇಕ್ಷಕರು ಸಿದ್ಧರಾಗಿರುತ್ತಾರೆ. ಬಂಡಿಗಳಲ್ಲಿ ನಿಂತಿರುವ ಯುವಕರು ಚೊಂಬು, ದೊಡ್ಡ ತಂಬಿಗೆಗಳಲ್ಲಿ ಬಣ್ಣ ತುಂಬಿಸಿಕೊಂಡು ಸಿದ್ಧರಾಗುತ್ತಾರೆ.
ಓಣಿಯೊಂದರಲ್ಲಿ ಬಂಡಿ ಪ್ರವೇಶಿಸುತ್ತಿದ್ದಂತೆ ನಾಲ್ಕು ದಿಕ್ಕಿನಿಂದ ಅಕ್ಷರಶಃ ಬಣ್ಣಗಳ ಮಳೆ. ಬಣ್ಣದಿಂದ ತಪ್ಪಿಸಿಕೊಂಡು ಎದುರುತ್ತರ ನೀಡುವಷ್ಟರಲ್ಲಿ ಮತ್ತೊಂದು ಸ್ಥಳದಿಂದ ಆಕ್ರಮಣ ನಡೆಯುತ್ತದೆ. ಯುವಕರಷ್ಟೇ ಅಲ್ಲ ಚಿಣ್ಣರೂ ಆಟದಲ್ಲಿ ರಂಗಿನ ಸೇನಾನಿಗಳಾಗಿರುತ್ತಾರೆ. ಪುಟ್ಟ ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಬಣ್ಣ ತುಂಬಿಸಿಕೊಂಡ ಮಕ್ಕಳು ಬಂಡಿಗಳತ್ತ ಗುರಿಯಿಡುತ್ತಾರೆ.
ಕೆಲವು ಚತುರ ಯುವಕರು ಬಂಡಿಯಲ್ಲಿ ಬಣ್ಣದ ಸಂಗ್ರಹ ಮುಗಿಯುವುದನ್ನೇ ಕಾಯುತ್ತಾರೆ. ಬಂಡಿಯವರ ಬಣ್ಣ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಅವಿತಿಟ್ಟ ಬ್ಯಾರಲ್ಗಳಿಂದ ಭರ್ಜರಿ ದಾಳಿ ನಡೆಯುತ್ತದೆ. ದಾಳಿಯಿಂದ ಪಾರಾಗಲು ಕೆಲ ಸಂದರ್ಭಗಳಲ್ಲಿ ಕನ್ನಡಕ, ರಟ್ಟಿನ ತುಣುಕುಗಳನ್ನೂ ಬಳಸಲಾಗುತ್ತದೆ. ಬಂಡಿಗಳಿಗೆ ಬೇವಿನ ಎಲೆಗಳ ಅಲಂಕಾರವೂ ಇರುತ್ತದೆ. ಎಲ್ಲ ಓಣಿಗಳಲ್ಲಿ ಬಂಡಿಗಳು ಹಾಯ್ದು ಬವಿವ ಸಂಘದ ಹತ್ತಿರ ಸೇರುತ್ತಿದ್ದಂತೆ ಮತ್ತೊಮ್ಮೆ ಬಹಿರಂಗ ಬಣ್ಣದಾಟ ನಡೆಯುತ್ತದೆ. ಎಲ್ಲ ಬ್ಯಾರಲ್ಗಳಲ್ಲಿ ಬಣ್ಣ ಮುಗಿಯುತ್ತಿದ್ದಂತೆ ವರ್ಷದ ಬಣ್ಣದಾಟಕ್ಕೆ ರಂಗಿನ ತೆರೆ.
ಬೇರೆ ಪ್ರದೇಶಗಳಲ್ಲಿ ನೆಲೆಸಿರುವ ಯುವಕರು ಮೂರು ದಿನವೂ ಬಣ್ಣವಾಡುವುದು ಹೋಳಿ ಪ್ರೀತಿಗೆ ಉದಾಹರಣೆ. ಮೂರು ದಿನದ ರಂಗಿನಾಟದಿಂದ ನಗರದ ತುಂಬೆಲ್ಲ ಬಣ್ಣಗಳ ಸಾಮ್ರಾಜ್ಯ. ಮತ್ತೆ ಮುಂದಿನ ವರ್ಷ ಬಣ್ಣ ಆಡೋಣು ಎಂಬ ಭಾವನೆಯೊಂದಿಗೆ ಯುವಕರು ಮನೆಗಳತ್ತ ತೆರಳುತ್ತಾರೆ.


No comments:

Post a Comment