Tuesday, March 10, 2009

ರಾಷ್ಟ್ರ, ರಾಜ್ಯ ಮಟ್ಟದ ಖ್ಯಾತಿ


ಬ್ರಿಟಿಷರ ಕಾಲದಲ್ಲಿ ತಾಲೂಕು ಕಚೇರಿಯಾಗಿದ್ದ ಪಾಣಿ ಮಹಲ್.

ತುರಾಯಿ ಶಹನಾಯಿ ವಾದನ, ನಿಶಾನಿ ಮೆರವಣಿಗೆ
ವಿಕ ಸುದ್ದಿಲೋಕ
ಬಾಗಲಕೋಟ: ನಗರದ ಹೋಳಿ ಹಬ್ಬದ ವಿಶೇಷವೆಂದರೆ ನಿಶಾನಿ, ತುರಾಯಿ ಹಲಗೆ ಹಾಗೂ ಕಾಮದಹನಕ್ಕೆ ಕಿಚ್ಚು ತರುವ ಮೆರವಣಿಗೆ. ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವೂ ಇದೆ.
ಹೋಳಿ ಹುಣ್ಣಿಮೆ ಆಚರಣೆಗೆ ಪೇಶ್ವೆಯರ ಕಾಲದಲ್ಲಿ ನಗರದ ಪ್ರತಿಷ್ಠಿತ ಮನೆತನಗಳಿಗೆ ಬಾಬುದಾರರು ಎಂಬ ವಿಶೇಷ ಅಭಿದಾನವಿತ್ತು. ಹೋಳಿ ಹಬ್ಬ ಆಚರಣೆಗೆ ಈ ಮನೆತನಗಳ ಮೂಲಕ ನಿಶಾನೆ, ತುರಾಯಿ ಹಲಗೆ ಮೆರವಣಿಗೆಯೊಂದಿಗೆ ಕಾಮ ದಹನಕ್ಕೆ ಬೆಂಕಿ ತರುವ ಪದ್ಧತಿ ಬೆಳೆದು ಬಂತು.
ನಗರದ ರಾಮರಾವ್ ಕುಲಕರ್ಣಿ ಅವರ ಮನೆತನ, ಶೆಟ್ಟರ್, ಸರನಾಡಗೌಡ, ದೇಸಾಯಿ ಹಾಗೂ ಖಾತೇದಾರರ ಮನೆತನಗಳು ಬಾಬುದಾರಿಕೆ ಪಡೆದಿವೆ. ಕುಲಕರ್ಣಿ ಅವರ ಮನೆಯಲ್ಲಿ ಪೂಜೆಗೊಳ್ಳುವ ನಿಶಾನೆಗಳು (ರೇಷ್ಮೆ ಬಟ್ಟೆ ಧ್ವಜ ಮಾದರಿ ಲಾಂಛನಗಳು), ತುರಾಯಿ ಹಲಗೆ (ಚಿನ್ನ, ಬೆಳ್ಳಿ ಲೇಪನ ಹಾಗೂ ಅಲಂಕೃತ ಹಲಗೆ)ಗಳು ಸಕಲ ಮರ್ಯಾದೆಯೊಂದಿಗೆ ಎಲ್ಲ ಬಾಬುದಾರರ ಮನೆಗಳಿಗೆ ತೆರಳುತ್ತವೆ. ಎಲ್ಲ ಕಡೆ ಪೂಜೆ ಕೈಗೊಂಡ ನಂತರ ಖಾತೆದಾರರ ಮನೆ ತಲುಪುತ್ತವೆ. ಅಲ್ಲಿ ಬೆಂಕಿ ನೀಡಲು ಚಿಕ್ಕ ಪ್ರೀತಿಯ ಕದನ ನಡೆಯುತ್ತದೆ. ಬೆಂಕಿ ಪಡೆದ ನಂತರ ಕಾಮ ದಹನವಾಗುತ್ತದೆ.
ಸರಕಾರಿ ಗೌರವ
ಕಾಮದಹನಕ್ಕೆ ತೆರಳುವ ಈ ಮೆರವಣಿಗೆಗೆ ಆಗಿನ ಕಾಲದಿಂದಲೂ ಸರಕಾರಿ ಗೌರವ ನೀಡಲಾಗಿದೆ. ಆದಿಲ್ಷಾಹಿ ಕಾಲದಲ್ಲಿ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡ ಕಿಲ್ಲಾ ಪ್ರದೇಶದ ಪಾಣಿಮಹಲ್ ಈ ಮೊದಲು ತಾಲೂಕು ಕಚೇರಿಯಾಗಿತ್ತು. ಈ ಸ್ಥಳದಲ್ಲಿ ನಿಶಾನೆಗಳಿಗೆ ಸರಕಾರದ ವತಿಯಿಂದ ಪೂಜೆ ಸಲ್ಲಿಸಲಾಗುತ್ತಿತ್ತು. ಪಾಣಿ ಮಹಲ್ ಮುಳುಗಡೆಯಾಗಿರುವುದರಿಂದ ಈಗ ಕೊತ್ತಲೇಶ ಗುಡಿ ಸಮೀಪದ ಚಾವಡಿಗೆ ಈ ಪ್ರಕ್ರಿಯೆ ಸ್ಥಳಾಂತರಗೊಂಡಿದೆ.
ಚಿಕ್ಕ ಹಲಗೆ, ದೊಡ್ಡ ಹಲಗೆಗಳೊಂದಿಗೆ ತೆರಳುವ ನಿಶಾನೆಗಳ ಮೆರವಣಿಗೆಯೂ ನಗರದ ಸಂಸ್ಕೃತಿಯ ಪ್ರತೀಕ. ಈ ಮೆರವಣಿಗೆಯ ಮುಂಭಾಗದಲ್ಲಿ ಕಂಬಿ ಸಾಗುತ್ತದೆ. ನಂತರ ಕಣಿ, ಶಹನಾಯಿ, ಚಿಕ್ಕ ಹಲಗೆ ಹಾಗೂ ದೊಡ್ಡ ಹಲಗೆಗಳನ್ನು ನುಡಿಸುತ್ತ ಮೆರವಣಿಗೆ ನಗರದೆಲ್ಲೆಡೆ ಸಂಚರಿಸುತ್ತದೆ. ಮೆರವಣಿಗೆ ನಿರ್ದಿಷ್ಟ ಮಾರ್ಗದಲ್ಲಿಯೇ ಸಂಚರಿಸಬೇಕು ಎಂಬ ನಿಯಮವಿರುವುದರಿಂದ ಬೆಳಗ್ಗೆ ೪ ಗಂಟೆವರೆಗೆ ಕಾಮ ದಹನಕ್ಕೆ ಕಿಚ್ಚು ದೊರೆಯುತ್ತದೆ.
ವಿಶಿಷ್ಟ ಕಲಾ ಪ್ರಕಾರ
ಕೇವಲ ಹೋಳಿ ಹಬ್ಬದ ಆಚರಣೆಗೆ ಹಲಗೆ ತುರಾಯಿ ವಾದನ ಸೀಮಿತವಾಗಿಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ಈ ಕಲಾ ಪ್ರಕಾರಕ್ಕೆ ಮನ್ನಣೆ ದೊರೆತಿದೆ. ೨೦೦೧ರಲ್ಲಿ ದಿಲ್ಲಿಯಲ್ಲಿ ನಡೆದ ಫೂಲ್ವಾಲೋ ಕಿ ಸೈರ್ ಕಾರ್ಯಕ್ರಮದಲ್ಲಿ ಆಗಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಎದುರು ತಂಡ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ.
ಕೇರಳದ ಅಲೆಪ್ಪಿಯಲ್ಲಿ ನಡೆದ ನೆಹರೂ ಬೋಟ್ ರೇಸ್, ಹೈದರಾಬಾದ್ನ ಭಾರತದ ರಾಷ್ಟ್ರೀಯ ಉತ್ಸವಗಳು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗಣರಾಜ್ಯೋತ್ಸವ, ಮೈಸೂರು ದಸರಾ ಸೇರಿದಂತೆ ಬೆಂಗಳೂರು ಹಾಗೂ ಹೈದರಾಬಾದ್ಗಳಲ್ಲಿ ನಡೆದ ರಾಜ್ಯ, ರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ತಂಡಕ್ಕೆ ಪ್ರಶಸ್ತಿ ದೊರೆತಿವೆ. ಬಾಗಲಕೋಟದ ಹೋಳಿ ಜಾತ್ಯತೀತ ಹಾಗೂ ಸಾಮರಸ್ಯ ಮನೋಭಾವಕ್ಕೂ ಸಾಕ್ಷಿ. ಜಾತಿ, ಭೇದಗಳಿಲ್ಲದೆ ಎಲ್ಲ ಸಮಾಜ, ಸಮುದಾಯದವರು ಇಲ್ಲಿ ಹೋಳಿ ಆಚರಿಸುತ್ತಾರೆ. ಪರಿಚಿತರಿರಲಿ, ಅಪರಿಚಿತರಿರಲಿ ಬಣ್ಣದಾಟವಾಡುತ್ತಾರೆ.



ಬ್ರಿಟಿಷರ ಕಾಲದಲ್ಲಿ ತಾಲೂಕು ಕಚೇರಿಯಾಗಿದ್ದ ಪಾಣಿ ಮಹಲ್.

No comments:

Post a Comment