
ವೀರೇಶ ಬಾಗೇವಾಡಿ ವಿಕ ಸುದ್ದಿಲೋಕ
ಕಲಾದಗಿ: ಕುದಿಯುವ ಎಣ್ಣೆಯಲ್ಲಿ ಲಟ್ಟಿಸಿದ ಪೂರಿಗಳನ್ನು ಹಾಕುತ್ತಾರೆ. ಅಲ್ಲಿ ಸೇರಿದ ಯುವಕರು ಬರಿಗೈಯಿಂದ ಸುಡುವ ಎಣ್ಣೆಯಲ್ಲಿರುವ ಪೂರಿಗಳನ್ನು ತೆಗೆಯುತ್ತಾರೆ. ಅವರ ಕೈಗೆ ಯಾವುದೇ ಗಾಯ, ಸುಟ್ಟ ಗುಳ್ಳೆಗಳಾಗುವುದಿಲ್ಲ.
ಒಂದು ವೇಳೆ ಕೈ ಸುಟ್ಟು ಗುಳ್ಳೆಗಳೆದ್ದರೆ ಆತ ಏನೋ ತಪ್ಪು ಮಾಡಿದ್ದಾನೆ ಅಥವಾ ದುರ್ಮಾರ್ಗ ಹಿಡಿದಿದ್ದಾನೆ ಎಂದರ್ಥ.
ಇದೇನು ಯಾವುದೆ ಪವಾಡ ಕಾರ್ಯಕ್ರಮವಲ್ಲ. ಹರಣಶಿಕಾರಿ ಸಮುದಾಯದವರು ಆಚರಿಸುವ ವಿಶಿಷ್ಟ ಹೋಳಿ ಹಬ್ಬವಿದು.
ಸಾಮಾನ್ಯವಾಗಿ ಕಾಮದಹನ ಮಾಡಿ ಒಬ್ಬರಿಗೊಬ್ಬರು ಬಣ್ಣ ಎರಚಿ ಸಂತಸಪಟ್ಟರೆ, ಆದಿವಾಸಿ ಜನಾಂಗವೆಂದು ಗುರುತಿಸಲಾಗಿರುವ ಹರಣಶಿಕಾರಿಗಳು ತಮ್ಮ ಪೂರ್ವಜರು ಹಾಕಿಕೊಟ್ಟ ಪರಂಪರೆಯಂತೆ ಈ ಹಬ್ಬವನ್ನು ತಮ್ಮ ಸಮಾಜದ ಜನ ಸುರಕ್ಷತೆಯಿಂದಿರಲಿ, ಯಾವುದೇ ತಪ್ಪು ಹಾದಿ ತುಳಿಯದಿರಲಿ ಎಂಬ ಸಂದೇಶದೊಂದಿಗೆ ಆಚರಿಸುತ್ತಾರೆ.
ಆದಿವಾಸಿ ಜನಾಂಗದ ಅದೇವತೆ ಆದಿಶಕ್ತಿಯ ವಿಶೇಷ ಪೂಜೆಯನ್ನು ನೆರವೇರಿಸಿ ಹೋಳಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ.
ಹುಣ್ಣಿಮೆಯ ಮರು ದಿನ ತಮ್ಮ ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದಿರುವ ಪೆಟ್ಟಿಗೆ ಹಾಗೂ ಅದರಲ್ಲಿನ ಬೆಳ್ಳಿಯ ಆದಿಶಕ್ತಿಯ ವಿಗ್ರಹಗಳನ್ನು ಬೆಳಗಿನ ಜಾವ ಹೊರತೆಗೆದು ಪೂಜಿಸಿ ದೇವಿಯ ನೈವೇದ್ಯಗೆಂದು ಪೂರಿ ಅಥವಾ ಸಣ್ಣ ಚಪಾತಿ ಮಾಡಿ ಅವುಗಳನ್ನು ಕಾಯ್ದ ಎಣ್ಣೆಯಲ್ಲಿ ಹಾಕಿ ಬರಿಗೈಯಿಂದ ತೆಗೆಯಲಾಗುತ್ತದೆ. ಹಾಗೆ ತೆಗೆಯುವ ಸಂದರ್ಭದಲ್ಲಿ ಕೈಗಳಿಗೆ ಗುಳ್ಳೆ ಅಥವಾ ಗಾಯಗಳಾದರೆ ಅವರಿಂದ ತಪ್ಪು ಹಾಗೂ ಅನೈತಿಕ ಹಾದಿ ತುಳಿದಿರುವದಾಗಿ ಭಾವಿಸಲಾಗುತ್ತದೆ.
ಆದಿವಾಸಿ ಜನಾಂಗವಾದ ನಮಗೆ ಶಿಕಾರಿ(ಬೇಟೆ)ಯಾಡುವುದೇ ಮುಖ್ಯ ಕಸುಬಾಗಿತ್ತು ಈ ಸಂದರ್ಭದಲ್ಲಿ ಕಾಡುಗಳಲ್ಲಿ ಸಂಚರಿಸುವಾಗ ಪಿಶಾಚಿ ಹಾಗೂ ವನ್ಯ ಮೃಗಗಳಿಂದ ಯಾವುದೇ ತೊಂದರೆಯಾಗದಿರಲಿ ಎಂಬ ನಂಬಿಕೆಯೊಂದಿಗೆ ಹೋಳಿ ಹಬ್ಬದಲ್ಲಿ ಈ ರೀತಿಯ ಸಂಪ್ರದಾಯ ಆಚರಿಸಲಾಗುತ್ತದೆ ಎಂದು ಸಮಾಜದ ದಲ್ಲಪ್ಪ ಪೂಜಾರಿ ಹೇಳುತ್ತಾರೆ.
No comments:
Post a Comment